top of page

ಶೇ.33 ರಷ್ಟು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಯಾಗುವವರೆಗೂ ತಾ.ಪಂ,ಜಿ.ಪಂ.ಚುನಾವಣೆ ಮುಂದೂಡಲು ಮನವಿ.

  • Writer: newsnowvijayanagar
    newsnowvijayanagar
  • Dec 25, 2024
  • 1 min read

ಹೊಸಪೇಟೆ (ವಿಜಯನಗರ) ಡಿ,25:ರಾಜಕೀಯವಾಗಿ ಹಿಂದುಳಿದ ಹಾಗೂ ಅತೀ ಹಿಂದುಳಿದ ಜಾತಿಗಳಿಗೆ ಪ್ರತಿಶತ 33%ರಷ್ಟು ಸ್ಥಾನ ಮೀಸಲಾತಿ ಕಾಯ್ದೆ ಜಾರಿಗೊಳಿಸಿದ ನಂತರವೇ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕೆಂದು ವಿಜಯನಗರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟವು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.


ಈ ವೇಳೆ ಒಕ್ಕೂಟದ ಜಿಲ್ಲಾಧ್ಯಕ್ಷ ವೈ.ಯಮುನೇಶ್ ಮಾತನಾಡಿ, ದಿ|| ರಾಜೀವ್‌ಗಾಂದಿಯವರು ದೇಶದ ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ ಸಂವಿಧಾನದ 73ನೇ ತಿದ್ದುಪಡಿಯನ್ನು ಆಧಾರವಾಗಿಟ್ಟುಕೊಂಡು ನಮ್ಮ ರಾಜ್ಯದಲ್ಲಿ ಪಂಚಾಯತ್ ರಾಜ್ ಕಾಯ್ದೆಯು 10.05.1993 ರಿಂದ ಜಾರಿಗೆ ಬಂದಿದೆ. ರಾಜಕೀಯ ಅಧಿಕಾರವನ್ನು ತಳಮಟ್ಟದಲ್ಲಿ ವಿಕೇಂದ್ರಿಕರಣಗೊಳಿಸುವ ಉದ್ದೇಶದಿಂದ ರಾಷ್ಟ್ರಪಿತ ಮಹಾತ್ಮಾಗಾಂಧಿಯವರ“ಹಳ್ಳಿಗಳ ಉದ್ದಾರವೇ, ರಾಷ್ಟ್ರ ಉದ್ದಾರ” ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಉದ್ದೇಶದಿಂದ ಈ ವ್ಯವಸ್ಥೆ ಅಸ್ಥಿತ್ವಕ್ಕೆ ಬಂದಿದೆ. ಗ್ರಾಮ, ತಾಲೂಕು, ಹಾಗೂ ಜಿಲ್ಲಾ ಪಂಚಾಯಿತಿ ಎಂಬ ಮೂರು ಹಂತದಲ್ಲಿ ಅಧಿಕಾರ ವಿಕೇಂದ್ರಿಕರಣದ ಮೂಲಕ ಸ್ಥಳೀಯ ಮತದಾರರು ಸ್ಥಳೀಯವಾಗಿ ತಮ್ಮ ಪ್ರತಿನಿಧಿಗಳನ್ನು ಚುನಾಯಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಈ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳಿಗೆ ನಿಗಧಿಪಡಿಸಿರುವ ಮೀಸಲಾತಿ ಅತ್ಯಂತ ಅವೈಜ್ಞಾನಿಕವಾಗಿದೆ. ರಾಜ್ಯದಲ್ಲಿ ಶೇಕಡ 35% ರಷ್ಟಿರುವ ರಾಜಕೀಯವಾಗಿ ಅತೀ ಹಿಂದುಳಿದಿರುವ ಜಾತಿಗಳಿಗೆ ಅತ್ಯಲ್ಪ ಮೀಸಲಾತಿ ನೀಡಿರುವುದು ನ್ಯಾಯೋಚಿತವಲ್ಲ. ಈ ಅಂಶವನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್ನ ತೀರ್ಪಿನಂತೆ ನಮ್ಮ ರಾಜ್ಯದಲ್ಲಿ ಜಸ್ಟೀಸ್.ಕೆ ಭಕ್ತವತ್ಸಲಂ ಆಯೋಗವು ಪಂಚಾಯಿತಿ ವ್ಯವಸ್ಥೆಯಲ್ಲಿ ರಾಜಕೀಯವಾಗಿ ಹಿಂದುಳಿದ ಜಾತಿಗಳಿಗೆ ಶೇಕಡ 33%ರಷ್ಟು ಮೀಸಲಾತಿ ನೀಡಬೇಕೆಂದು 2022 ರಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಹಿಂದುಳಿದ ಜಾತಿಗಳಿಗೆ ರಾಜಕೀಯ ಮೀಸಲಾತಿ ಇಲ್ಲದಿರುವಾಗ ಕನಿಷ್ಠ ಸ್ಥಳೀಯ ಸಂಸ್ಥೆಗಳಲ್ಲಾದರೂ ಈ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವುದು ಸರ್ಕಾರದ ಸಂವಿಧಾನಾತ್ಮಕ ಜವಾಬ್ದಾರಿಯಾಗಿದೆ. ಆದುದರಿಂದ ಜಸ್ಟೀಸ್.

ಕೆ.ಭಕ್ತವತ್ಸಲಂ ಆಯೋಗದ ಶಿಫಾರಸ್ಸಿನಂತೆ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಕ್ಕೆ ಶೇಕಡ 33% ರಷ್ಟು ಮೀಸಲಾತಿ ಕಾಯ್ದೆ ಜಾರಿಗೊಳಿಸಿದ ನಂತರವೇ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದರು.



ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಯು.ಆಂಜನೇಯಲು, ಪ್ರೋ.ಉಮಾಮಹೇಶ್ವರ್, ಪಂಪಣ್ಣ, ವೆಂಕೋಬಪ್ಪ, ಈ.ಕುಮಾರಸ್ವಾಮಿ, ಈ.ರಾಘವೇಂದ್ರ, ಸಣ್ಣಮಾರೆಪ್ಪ, ಪರಮೇಶ್, ಕೆ.ಶ್ರೀನಿವಾಸ್, ಎಂ.ಕೆ.ಬಾಷ, ಕೆ.ತಿಪ್ಪೇಸ್ವಾಮಿ, ಬಿ.ವಿರುಪಾಕ್ಷಪ್ಪ, ಐಲಿಸಿದ್ದಣ್ಣ, ಯು.ಅಶ್ವಥಪ್ಪ, ಬೋಜರಾಜೇಂದ್ರ, ರವಿಕುಮಾರ್,ಎ.ಮರಿಯಪ್ಪ, ರಾಮನಮಲಿ,ಶಂಕ್ರಪ್ಪ, ಎಸ್.ಟಿ.ಮುಂಡರಗಿ, ಮನೋಹರ್ ಇದ್ದರು.

Comments


bottom of page