top of page

ಜಗದ್ಗುರು ಶ್ರೀ ವಿಧುಶೇಖರ ಭಾರತಿ ಧರ್ಮ ದಿಗ್ವಿಜಯ

  • Writer: newsnowvijayanagar
    newsnowvijayanagar
  • Dec 27, 2024
  • 1 min read

Updated: Dec 29, 2024





ಬೆಂಗಳೂರು: ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಜನವರಿ 16 ರಂದು ಧರ್ಮ ದಿಗ್ವಿಜಯ ಯಾತ್ರೆ ಆರಂಭಿಸಲಿದ್ದು ಬೆಂಗಳೂರು, ಆಂಧ್ರಪ್ರದೇಶದ ನಂತರ ಬಳ್ಳಾರಿ ಹಾಗೂ ಹೊಸಪೇಟೆಗೆ ಚಿತ್ತೈಸಲಿದ್ದಾರೆ.


ಹೊಸಪೇಟೆಯಿಂದ ವಿಶೇಷ ವಿಮಾನದಲ್ಲಿ ಜನವರಿ 24 ರಂದು ಹೊರಟು ಉತ್ತರ ಪ್ರದೇಶದ ಪ್ರಯಾಗರಾಜ್ ತಲುಪಲಿದ್ದಾರೆ. ಮಹಾ ಕುಂಭ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಆರು ದಿನ ತಂಗಲಿರುವ ಸನ್ನಿಧಾನ ಪವಿತ್ರ ಸ್ನಾನ ಮಾಡಲಿದ್ದಾರೆ.ಈ ಬಾರಿ ಕುಂಭ ಮೇಳಕ್ಕೆ 25 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದ್ದು,ಕುಂಭ ಸ್ನಾನಕ್ಕಾಗಿ ಶೃಂಗೇರಿಯ ಜಗದ್ಗುರುಗಳಿಗೆ ಉತ್ತರ ಪ್ರದೇಶದ ಸರ್ಕಾರ ವಿಶೇಷ ವ್ಯವಸ್ಥೆ ಕಲ್ಪಿಸಲಿದೆ. ನಂತರ ಸನ್ನಿಧಾನ ಪವಿತ್ರ ಕಾಶಿಯನ್ನು ತಲುಪಲಿದ್ದು ಎಂಟು ದಿನಗಳ ಕಾಲ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.


ಕಾಶಿಯಲ್ಲಿ ಜಗದ್ಗುರು ಶ್ರೀ ವಿದ್ಯಾರಣ್ಯರು ಸ್ಥಾಪಿಸಿ ಪೂಜಿಸಿದ ಶ್ರೀ ಚಂದ್ರಮೌಳೇಶ್ವರ ಸನ್ನಿಧಿಯಲ್ಲಿ ಶ್ರೀಗಳು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕಾಶಿಯ ಪಂಡಿತ ಪರಿಷತ್ ಸೇರಿದಂತೆ ಅಲ್ಲಿನ ಮಹಾರಾಜರು, ಧಾರ್ಮಿಕ ಮುಖಂಡರು, ಸನ್ಯಾಸಿ ಸಮೂಹ ಶೃಂಗೇರಿಯ ಜಗದ್ಗುರುಗಳ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಶ್ರೀಗಳ ವಾಸ್ತವ್ಯದ ಸಂದರ್ಭ ಶೃಂಗೇರಿಯ ಋತ್ವಿಕರಿಂದ ಕಾಶಿಯಲ್ಲಿ ಗಣ ಹೋಮ, ರುದ್ರ ಹೋಮ, ಕುಂಕುಮಾರ್ಚನೆ ಮತ್ತು ಸಹಸ್ರ ಚಂಡಿಕಾಯಾಗದಂತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಇನ್ನೂರೈವತ್ತು ವೇದ ಪಂಡಿತರು ಕಾಶಿಯಲ್ಲಿ ನಡೆಸಲಿದ್ದಾರೆ.ಶ್ರೀಗಳು ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ.ಕಾಶೀ ವಿಶ್ವನಾಥ, ವಿಶಾಲಾಕ್ಷಿ ದೇವಸ್ಥಾನಗಳಲ್ಲಿ ಜಗದ್ಗುರುಗಳಿಂದ ವಿಶೇಷ ಪೂಜೆ ಸಲ್ಲಲಿದೆ.ಕಾಶಿಯ ಅನ್ನಪೂರ್ಣ ದೇವಸ್ಥಾನದಲ್ಲಿ ಸ್ಥಾಪಿಸಿರುವ ಮೂರ್ತಿಯನ್ನು ಶೃಂಗೇರಿಯ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮಿಗಳು ಕಳಿಸಿದ್ದು, ಅದರ ಪ್ರತಿಷ್ಠೆ ಕುಂಬಾಭಿಷೇಕಕ್ಕೂ ತಮ್ಮ ಶಿಷ್ಯ ಶ್ರೀ ಭಾರತೀತೀರ್ಥರೊಂದಿಗೆ ಅವರು ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು.


ಕಾಶಿಯಿಂದ ಅಯೋಧ್ಯೆಗೆ ತೆರಳಲಿರುವ ಸನ್ನಿಧಾನಂಗಳು ಅಲ್ಲಿ ಒಂದು ದಿನ ತಂಗಲಿದ್ದು ಪ್ರಭು ಶ್ರೀರಾಮಚಂದ್ರನ ದರ್ಶನ ಪೂಜೆ ಮಾಡಲಿದ್ದಾರೆ. ಅಯೋಧ್ಯೆಯ ಶ್ರೀರಾಮಚಂದ್ರನ ಪ್ರತಿಷ್ಠಾ ಕುಂಬಾಭಿಷೇಕಕ್ಕೆ ಶೃಂಗೇರಿಯ ಜಗದ್ಗುರುಗಳು ತೆರಳಿರಲಿಲ್ಲ. ಹೀಗಾಗಿ ನೂತನ ಭವ್ಯ ಮಂದಿರದಲ್ಲಿ ವಿರಾಜಮಾನರಾಗಿರುವ ಪ್ರಭು ಶ್ರೀರಾಮಚಂದ್ರನ ದರ್ಶನ ಮಾಡಲಿದ್ದಾರೆ. ಆಮ್ನಾಯ ಪೀಠದ ಜಗದ್ಗುರುಗಳಿಂದ ಪ್ರಥಮಬಾರಿ ಶ್ರೀರಾಮಚಂದ್ರನ ಪೂಜೆ ನೂತನ ಮಂದಿರದಲ್ಲಿ ನೆರವೇರಲಿದೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಶೃಂಗೇರಿಯ ವಿರೋಧ ಇದೆ ಎಂದು ಮಿಥ್ಯಾರೋಪ ಮಾಡಿದವರಿಗೆ ಪ್ರತ್ಯಕ್ಷ ಉತ್ತರ ದೊರಕಲಿದೆ. ಅಯೋಧ್ಯೆಯಲ್ಲಿನ ಒಂದು ದಿನದ ವಾಸ್ತವ್ಯದ ನಂತರ ಶ್ರೀಗಳು ಗೋರಖ್‌ಪುರಕ್ಕೆ ಚಿತ್ತೈಸಲಿದ್ದಾರೆ.ನಂತರ ವಿಶೇಷ ವಿಮಾನದಲ್ಲಿ ಫೆ.13 ರಂದು ಮಂಗಳೂರಿನ ಮೂಲಕ ಶೃಂಗೇರಿ ತಲುಪಲಿದ್ದಾರೆ. ಪುಣ್ಯ ಕ್ಷೇತ್ರಗಳ ಸಂದರ್ಶನದ ಈ ವಿಜಯ ಯಾತ್ರೆಯ ಉದ್ದಕ್ಕೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

Comments


bottom of page