top of page

ಎನ್.ಎಸ್.ಭೋಸರಾಜು ಸೂಚನೆ, ತುಂಗಭದ್ರಾ ಅಣೆಕಟ್ಟು ಅಧಿಕಾರಿಗಳೊಂದಿಗೆ ಸಭೆ

  • Writer: newsnowvijayanagar
    newsnowvijayanagar
  • Jan 4
  • 1 min read

ವಿಜಯನಗರ (ಹೊಸಪೇಟೆ), ಜನವರಿ,04 : ನೀರಾವರಿ ಸಲಹಾ ಸಮಿತಿಯ ನಿರ್ಣಯದಂತೆ ತುಂಗಭದ್ರಾ ಎಡದಂಡೆಯ ಕಾಲುವೆಯಲ್ಲಿ ಹರಿಸಲಾಗುತ್ತಿರುವ 3800 ಕ್ಯೂಸೆಕ್ಸ್ ನೀರು ಕೊನೆಯ ಭಾಗದ ರೈತರಿಗೂ ಸಮರ್ಪಕವಾಗಿ ನೀರು ಸರಬರಾಜು ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಭೋಸರಾಜು ಸೂಚನೆ ನೀಡಿದರು.


ಹೊಸಪೇಟೆಯ ಟಿ.ಬಿ.ಡ್ಯಾಂನ ಪ್ರವಾಸಿ ಮಂದಿರದಲ್ಲಿ ತುಂಗಭದ್ರಾ ಅಣೆಕಟ್ಟಿನ ಹಿರಿಯ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಶುಕ್ರವಾರ ಮಾತನಾಡಿದರು, ಜ.1 ರಿಂದ ಎಡದಂಡೆ ಕಾಲುವೆಯಲ್ಲಿ 3800 ಕ್ಯೂಸೆಕ್ಸ್ ನೀರು ಹರಿಸುವಂತೆ ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಕಾಲುವೆಯಲ್ಲಿ ನೀರನ್ನು ಹರಿಯಬಿಡಲಾಗಿದ್ದು, ಎಲ್ಲಾ ಭಾಗದ ರೈತರಿಗೆ ನೀರು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಇದರಿಂದ ಬೆಳೆ ಹಾನಿಯಾಗುವ ಆತಂಕದಿಂದ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಎಲ್ಲಾ ಭಾಗಕ್ಕೂ ಸಮರ್ಪಕವಾಗಿ ನೀರು ದೊರೆಯಲು ಗೇಜ್ ಕಾಲುವೆ ಗೇಜ್ ನಿರ್ವಹಣೆ ಮಾಡುವುದು ಬಹಳ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.


ದೂರವಾಣಿ ಮೂಲಕ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತಾರೊಂದಿಗೆ ಮಾತನಾಡಿದ ಸಚಿವರು, ಸಮರ್ಪಕ ನೀರು ನಿರ್ವಹಣೆಯ ನಿಟ್ಟಿನಲ್ಲಿ ಕಲಬುರ್ಗಿ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡುವಂತೆ ಸೂಚಿಸಿದರು. ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಜಿಲ್ಲೆಗಳ ಮಧ್ಯೆ ಸಮನ್ವಯತೆ ಸಾಧಿಸಬೇಕು. ನೀರು ಎಲ್ಲಾ ಭಾಗದ ರೈತರಿಗೂ ಸಮರ್ಪಕವಾಗಿ ಲಭ್ಯವಾಗುವಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು. ಮುಂದಿನ 10 ದಿನಗಳು ಬಹಳ ಪ್ರಮುಖವಾಗಿದ್ದು, 69 ಮೈಲು ಕಾಲುವೆಯ ಕೊನೆಯ ಭಾಗದ (ಟೈಲ್ ಎಂಡ್) ರೈತರಿಗೂ ಸಮರ್ಪಕ ನೀರು ದೊರೆಯುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.



ಈ ವೇಳೆ ಸಭೆಯಲ್ಲಿ ಕೊಪ್ಪಳ ಸಂಸದರಾದ ರಾಜಶೇಖರ್ ಬಸವರಾಜ ಹಿಟ್ನಾಳ್, ತುಂಗಭದ್ರಾ ಅಣೆಕಟ್ಟಿನ ಮುಖ್ಯ ಅಭಿಯಂತರರು ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Comments


bottom of page