top of page

ಜವಾಬ್ದಾರಿ ಬಂದಾಗ ಸ್ವಂತ ಹಿತಾಸಕ್ತಿ ಮರೆಯಬೇಕು ಸಹಕಾರ ಭಾರತಿ ಪದಾಧಿಕಾರಿಗಳ ಪದಗ್ರಹಣ: ಸುಧಾಕರಜೀ ಸಲಹೆ

  • Writer: newsnowvijayanagar
    newsnowvijayanagar
  • Feb 1
  • 2 min read

ಕೊಪ್ಪಳ :ಸಾವಿರಾರು ಜನರಿಗೆ ಆರ್ಥಿಕ ಸಹಕಾರ ನೀಡುವ ಸಹಕಾರ ಸಂಘಗಳಲ್ಲಿ ಪ್ರಮಾಣಿಕತೆ,ಪಾರದರ್ಶಕತೆ ಮತ್ತು ಸಾಮಾಜಿಕ ಕಳಕಳಿ ಅತ್ಯವಶ್ಯವಾಗಿದೆ.ಸಹಕಾರ ಸಂಘಗಳನ್ನು ಸಬಲಗೊಳಿಸಲು ಸಹಕಾರ ಭಾರತಿ ಸಂಘಟನೆ ದೇಶದ್ಯಾಂತ ಕೆಲಸ ಮಾಡುತ್ತದೆ.ಇಂತಹ ಸಂಘಟನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳಲ್ಲಿ ಸ್ವಾರ್ಥ, ಅಹಂಭಾವದ ಮನಸ್ಥಿತಿ ಇರಬಾರದು. ಸಂಘಟನೆಗಳಲ್ಲಿ ಜವಾಬ್ದಾರಿ ಬಂದಾಗ ಪದಾಧಿಕಾರಿಗಳು ಸ್ವಂತ ಹಿತಾಶಕ್ತಿಯನ್ನು ಮರೆತು ಸಂಘಟನೆಗಾಗಿ ಕೆಲಸ ಮಾಡಬೇಕು ಎಂದು ಹಿಂದು ಸೇವಾ ಪ್ರತಿಷ್ಟಾನದ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತ ಸಂಯೋಜಕ ಸುಧಾಕರಜೀ ಸಲಹೆ ನೀಡಿದರು


.ನಗರದ ಮಳೆಮಲ್ಲೇಶ್ವರ ದೇವಸ್ಥಾನದ ರಂಗಮಂದಿರದಲ್ಲಿ ಶುಕ್ರವಾರ ನೂತನವಾಗಿ ಆಯ್ಕೆಯಾದ ಸಹಕಾರ ಭಾರತಿ ಸಂಘಟನೆಯ ಕೊಪ್ಪಳ ಜಿಲ್ಲಾ ಮತ್ತು ವಿವಿಧ ತಾಲೂಕಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ವಿಶೇಷ ಅತಿಥಿಯಾಗಿ ಮಾತನಾಡಿದರು.


ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಜನ ವಿಶ್ವಾಸ ಮಾಡುತ್ತಾರೆ.ವಿಶೇಷವಾಗಿ ಗ್ರಾಮೀಣ ಜನರ ಬದುಕಿಗೆ ಸಹಕಾರ ಸಂಘಗಳು ಆರ್ಥಿಕ ಶಕ್ತಿ ನೀಡಿ ಸ್ವಾವಲಂಬನೆಯ ಬದುಕಿಗೆ ಸಹಕಾರಿಯಾಗಿವೆ. ಹಣಕಾಸಿನ ವ್ಯವಹಾರ ಹೊಂದಿರುವುದರಿಂದ ಜನರ ನಂಬಿಕೆ, ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಸಹಕಾರ ಕ್ಷೇತ್ರವನ್ನು ಬಲಪಡಿಸುವ ಉದ್ದೇಶಕ್ಕಾಗಿ ಆರ್‌ಎಸ್‌ಎಸ್ ಪ್ರೇರಣೆಯಿಂದ ದೇಶದಲ್ಲಿ ಸಹಕಾರ ಭಾರತಿ ಸಂಘಟನೆ ಕೆಲಸ ಮಾಡುತ್ತದೆ.


ಸುಸಂಸ್ಕೃತ ವ್ಯಕ್ತಿಗಳನ್ನು ನಿರ್ಮಾಣ ಮಾಡುವುದು ಸಹಕಾರ ಭಾರತಿ ಸಂಘಟನೆ ಮುಖ್ಯ ಉದ್ದೇಶವಾಗಿದೆ. ಇತ್ತೀಚಿನ ದಿನಗಳಲ್ಲಿ ಹಗಲಿನಲ್ಲಿ ಲಾಟೀನ್ ಹಿಡಿದು ಶುದ್ಧ ವ್ಯಕ್ತಿಗಳನ್ನು ಹುಡುಕುವಂತಹ ಪರಿಸ್ಥಿತಿ ಇದೆ. ಆದರೆ ಸಹಕಾರ ಭಾರತಿ ಸಂಘಟನೆಯ ಪದಾಧಿಕಾರಿಗಳು ಇದಕ್ಕೆ ಹೊರತಾಗಿ ಕೆಲಸ ಮಾಡಬೇಕು.ಸಹಕಾರ ಭಾರತಿಯ ಸದಸ್ಯರೆಂದರೆ ಸಹಕಾರಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ವಿಶ್ವಾಸ, ನಂಬಿಕೆ ಹೆಚ್ಚಿಸುವಂತೆ ಪ್ರಮಾಣಿಕವಾಗಿ ಕೆಲಸ ಮಾಡಬೇಕು.ಆರ್ಥಿಕ ಶುದ್ಧತೆಯಿಂದ ಮನುಷ್ಯನ ವ್ಯಕ್ತಿತ್ವ ವೃದ್ಧಿಯಾಗುತ್ತದೆ.

ನಮ್ಮ ಶರೀರ, ಮನುಸ್ಸು, ಬುದ್ಧಿ ಮತ್ತು ಆತ್ಮದ ನಡುವೆ ಸಂಘರ್ಷ ನಡೆಯದಂತೆ ಎಚ್ಚರವಹಿಸಬೇಕು. ಸಹಕಾರ ಭಾರತಿ ಸೇರಿದಂತೆ ಪರಿವಾರದ ಸಂಘಟನೆಗಳಿಗೆ ಆರ್‌ಎಸ್‌ಎಸ್ ಮಾತೃ ಸಂಘಟನೆಯಾಗಿದೆ.ಸಂಘ ಸುಸಂಸ್ಕೃತ ವ್ಯಕ್ತಿಗಳ ನಿರ್ಮಾಣದ ಕೆಲಸ ಮಾಡುತ್ತದೆ.ಸುಸಂಸ್ಕೃತ ವ್ಯಕ್ತಿಗಳಿಂದ ಸಮಾಜ ಶುದ್ಧವಾಗುತ್ತದೆ ಎಂಬ ನಂಬಿಕೆಯಿಂದ ನಾವೆಲ್ಲರು ಕೆಲಸ ಮಾಡುತ್ತಿದ್ದೇವೆ. ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಸಂಘಟನೆಯ ಜವಬ್ದಾರಿ ನಿಭಾಯಿಸಬೇಕು ಎಂದು ಅವರು ಕರೆ ನೀಡಿದರು.

ಸಹಕಾರ ಭಾರತಿ ಸಂಘಟನೆ ರಾಜ್ಯಾಧ್ಯಕ್ಷ ಪ್ರಭುದೇವ ಆರ್.ಮಾಗನೂರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಪದಾಧಿಕಾರಿಗಳಿಗೆ ಜವಾಬ್ದಾರಿ ನಿಭಾಯಿಸುವ ಆತ್ಮ ವಿಶ್ವಾಸವಿರಬೇಕು.ಹೊಸಬರು ಸಂಘಟನೆಯ ಜವಾಬ್ದಾರಿ ವಹಿಸಿಕೊಂಡಾಗ ಧೈರ್ಯದಿಂದ ಮತ್ತು ನಂಬಿಕೆಯಿಂದ ಕೆಲಸ ಮಾಡಬೇಕು .ದೇಶದಾದ್ಯಂತ ಇರುವ ನಮ್ಮ ಸಂಘಟನೆ ಇಂದು ಸಹಕಾರಿಗಳಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ.


ಇಂತಹ ಸಂಘಟನೆಗೆ ನನ್ನನ್ನು ಉತ್ತರ ಕರ್ನಾಟಕದ ಪ್ರಾಂತದ ಅಧ್ಯಕ್ಷರನ್ನಾಗಿ ಮಾಡಿರುವ ಹಿರಿಯರ ನಂಬಿಕೆಯಂತೆ ನಾನು ಕೆಲಸ ಮಾಡುತ್ತೇನೆ. ಅದೇ ರೀತಿ ಕೊಪ್ಪಳ ಜಿಲ್ಲೆಯ ನೂತನ ಪದಾಧಿಕಾರಿಗಳು ಹಿರಿಯರ ಮಾರ್ಗದರ್ಶನ ಪಡೆದು ಪರಸ್ಪರ ನಂಬಿಕೆ, ವಿಶ್ವಾಸದಿಂದ ಸಂಘಟನೆ ಬಲಪಡಿಸಿ,ಜಿಲ್ಲೆಯ ಎಲ್ಲಾ ಸಹಕಾರಿಗಳ ಏಳ್ಗೆಗೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು


.ಸಹಕಾರ ಭಾರತಿ ಸಂಘಟನೆಯ ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ ಮಾತನಾಡಿ, ದೇಶಕ್ಕೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರ ಮುಂಚೂಣಿಯಲ್ಲಿದೆ. ಇಂತಹ ಸಹಕಾರ ಕ್ಷೇತ್ರದಲ್ಲಿ ಪ್ರಮಾಣಿಕ,ಪಾರದರ್ಶಕ ವ್ಯಕ್ತಿಗಳ ನಿರ್ಮಾಣಕ್ಕಾಗಿ ಮತ್ತು ಸಹಕಾರಿ ಕ್ಷೇತ್ರಗಳನ್ನು ಸಬಲಗೊಳಿಸಲು ೧೯೭೮ರಲ್ಲಿ ಸಹಕಾರ ಭಾರತಿ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ.೨೮ ರಾಜ್ಯದ ೭೦೦ ಜಿಲ್ಲೆಗಳಲ್ಲಿ ಸಹಕಾರ ಭಾರತೀ ವಿಸ್ತಾರಗೊಂಡಿದೆ.ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯವಾಗಲು ಸಹಕಾರ ಭಾರತಿ ಕೆಲಸ ಮಾಡಿದೆ.ಸಂಘಟನೆಯನ್ನು ಮುನ್ನಡೆಸಲು ಜವಬ್ದಾರಿ ನೀಡಲಾಗುತ್ತದೆ ಹೊರತು ಅಧಿಕಾರ, ಸ್ಥಾನಮಾನಕ್ಕಾಗಿ ಅಲ್ಲ ಎಂಬುದು ಎಲ್ಲಾ ಪದಾಧಿಕಾರಿಗಳ ಮನಸ್ಸಿನಲ್ಲಿ ಬರಬೇಕು.ಅಂದಾಗ ಮಾತ್ರ ಸಂಘಟನೆಗೆ ಶಕ್ತಿ ಬರುತ್ತದೆ.


ನಮ್ಮ ಸಂಘಟನೆ ಬಗ್ಗೆ ಜಿಲ್ಲೆಯ ಎಲ್ಲಾ ಸಹಕಾರಿಗಳಲ್ಲಿ ವಿಶ್ವಾಸವಿದೆ. ಆ ವಿಶ್ವಾಸವನ್ನು ಉಳಿಸಿಕೊಂಡು ಕೆಲಸ ಮಾಡಬೇಕು ಎಂದು ಕರೆ ನೀಡಿದರು.ಸಹಕಾರ ಭಾರತಿ ಸಂಘಟನೆಯ ಕೊಪ್ಪಳ ಜಿಲ್ಲೆಯ ನೂತನ ಅಧ್ಯಕ್ಷರಾಗಿರುವ ರಮೇಶ ಕವಲೂರ ಅವರಿಗೆ ರಾಜ್ಯಾಧ್ಯಕ್ಷ, ನಿಕಟಪೂರ್ವ ಜಿಲ್ಲಾಧ್ಯಕ್ಷರು ಧ್ವಜ ಹಸ್ತಾಂತರ ಮಾಡಿದರು.ನಂತರ ಜಿಲ್ಲಾ ಪದಾಧಿಕಾರಿಗಳನ್ನು ಎಲ್ಲಾ ಹಿರಿಯರು ಸನ್ಮಾನಿಸಿ ಗೌರವಿಸಿದರು.ಮಾಜಿ ಸಂಸದ ಶಿವರಾಮಗೌಡ,



ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಹಕಾರ ಭಾರತಿ ಸಂಘಟನೆ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ ಸೇರಿದಂತೆ ಇನ್ನಿತರ ಮುಖಂಡರು ಇದ್ದರು. ಶರಣಪ್ಪ ಹ್ಯಾಟಿ ನಿರ್ವಹಿಸಿದರು.ದೇವರಾಜ ಸ್ವಾಗತಿಸಿದರು. ಜಿಲ್ಲೆಯ ವಿವಿಧ ಸಹಕಾರ ಸಂಘಗಳ ನಿರ್ದೇಶಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Kommentare


bottom of page